ಶ್ರೀ ಶಾರದಾಂಬಾ

ಮಾಲಾ ಸುಧಾಕುಂಭ ವಿಬೋಧಮುದ್ರಾ-
ವಿದ್ಯಾವಿರಾಜತ್ಕರವಾರಿಜಾತಾಮ್ |
ಅಪಾರಕಾರುಣ್ಯಸುಧಾಂಬುರಾಶಿಂ
ಶ್ರೀಶಾರದಾಂಬಾಂ ಪ್ರಣತೋಽಸ್ಮಿ ನಿತ್ಯಮ್ ||

ಶೃಂಗೇರಿಯ ಶ್ರೀವಿದ್ಯಾಶಂಕರ ದೇವಾಲಯದಲ್ಲಿರುವ ಶ್ರೀಶಾರದಾಂಬೆಯ ಶ್ರೀಗಂಧದ ಮೂಲ ಮೂರ್ತಿ

ಶೃಂಗೇರಿಯ ಅಧಿದೇವತೆಯಾದ ಶ್ರೀ ಶಾರದಾಂಬೆಯ ದೇವಾಲಯವು ಪುರಾತನವಾದ, ಭವ್ಯವಾದ ಇತಿಹಾಸವನ್ನು, ಶ್ರೀಶಂಕರಭಗವತ್ಪಾದರು ದಕ್ಷಿಣಾಮ್ನಾಯಪೀಠವನ್ನು ಶೃಂಗೇರಿಯಲ್ಲಿ ಸ್ಥಾಪಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಶ್ರೀಆದಿಶಂಕರಭಗವತ್ಪಾದರು ಪುಣ್ಯಕ್ಷೇತ್ರವಾದ ಶೃಂಗೇರಿಗೆ ಬಂದು, ಇಲ್ಲಿಯ ಮನೋಹರ ಪ್ರಶಾಂತ ವಾತಾವರಣವನ್ನು ಕಂಡು, ತುಂಗಾನದಿಯ ತೀರದಲ್ಲಿ ಬೃಹಚ್ಛಿಲೆಯೊಂದರ ಮೇಲೆ ಶ್ರೀಚಕ್ರಯಂತ್ರವನ್ನು ಬರೆದು, ಶ್ರೀಗಂಧದ ಶ್ರೀಶಾರದಾ ಮೂರ್ತಿಯನ್ನು ಸ್ಥಾಪಿಸಿದ್ದರು. ತರುವಾಯ ಶ್ರೀ ಭಾರತೀತೀರ್ಥರು (11 ನೆಯ ಅಧಿಪತಿಗಳು) ಮರದ ಮತ್ತು ಹೆಂಚಿನ ಛಾವಣಿಯೊಂದಿಗೆ ಕೇರಳ ಶೈಲಿಯಲ್ಲಿ ದೇವಾಲಯವನ್ನು ನಿರ್ಮಿಸಿದರು.  ಸುವರ್ಣ ಅಂಶವು ಅಧಿಕವಾಗಿರುವ ಪಂಚಲೋಹದ ಶ್ರೀಶಾರದಾಂಬೆಯ ಭವ್ಯವಿಗ್ರಹವನ್ನು ಶ್ರೀವಿದ್ಯಾರಣ್ಯ ಮಹಾಸ್ವಾಮಿಗಳವರು (12 ನೆಯ ಅಧಿಪತಿಗಳು)  ಪ್ರತಿಷ್ಠಾಪಿಸಿದರು.

ಶೃಂಗೇರಿಯಲ್ಲಿನ ಶ್ರೀಶಾರದಾಂಬಾ ದೇವಾಲಯ

ಪೀಠದ 33ನೆಯ ಅಧಿಪತಿಗಳು ಜಗದ್ಗುರು ಶ್ರೀಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿಗಳವರು ಶಾರದಾಂಬೆಗೆ ವಿಶಾಲವಾದ ಶಿಲಾಮಯ ದೇಗುಲದ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದರು.  ಜಗದ್ಗುರು ಶ್ರೀಚಂದ್ರಶೇಖರಭಾರತೀ ಮಹಾಸ್ವಾಮಿಗಳವರು ನಿರ್ಮಾಣಕಾರ್ಯವನ್ನು ಪೂರ್ಣಗೊಳಿಸಿ 1916 ರಂದು ಮಹಾಕುಂಭಾಭಿಷೇಕವನ್ನು ನೆರವೇರಿಸಿದರು. ಶ್ರೀಅಭಿನವ ವಿದ್ಯಾತೀರ್ಥರು ದೇವಸ್ಥಾನದಲ್ಲಿ ಹಲವಾರು ಸುಧಾರಣೆಗಳನ್ನು ಮಾಡಿದರು.

ಶ್ರೀಶಾರದಾ ದೇವಾಲಯವು ದ್ರಾವಿಡ ಶೈಲಿಯಲ್ಲಿ ನಿರ್ಮಿತವಾಗಿದ್ದು ನಾಲ್ಕು ಪ್ರವೇಶ ದ್ವಾರಗಳನ್ನು ಹೊಂದಿದೆ. ಪೂರ್ವದ್ವಾರದ ಎಡ ಬಲ ಭಾಗಗಳಲ್ಲಿ ಎರಡು ಎತ್ತರದ ಶಿಲಾಮಂಟಪಗಳು, ಮುಂದೆ ರಂಗಮಂಟಪ, ನಾನಾ ರೀತಿಯ ಕೆತ್ತನೆಗಳಿಂದ ಕೂಡಿರುವ ಬೃಹತ್ತಾದ ಕಂಬಗಳು, ಮಹಿಷಮರ್ದಿನಿ, ರಾಜರಾಜೇಶ್ವರಿ ಅಮ್ಮನವರನ್ನು ಒಳಗೊಂಡ ಸ್ತಂಭಗಳು, ಸುಂದರವಾದ ದ್ವಾರಪಾಲಕ ಮೂರ್ತಿಗಳು ದೇವಾಲಯದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತಿವೆ. ಗರ್ಭಗುಡಿಯ ಹೊರ ಆವರಣವು ಸಂಪೂರ್ಣ ನುಣುಪು ಶಿಲೆಯಿಂದ ಕೂಡಿದೆ. ಹಾಗೂ ಒಳ ಆವರಣವು ಚಿನ್ನದ ಲೇಪನದಿಂದ ಕೂಡಿಕೊಂಡು ಬಂಗಾರದ ಬಾಗಿಲನ್ನು ಹೊಂದಿರುತ್ತದೆ.  

ಅಸದೃಶವಾದ ಪ್ರಭಾವವುಳ್ಳ, ಅವಿಚ್ಛಿನ್ನವಾದ ಗುರುಪರಂಪರೆಯಿಂದ ಪೂಜಿಸಲ್ಪಡುತ್ತಿರುವ ಶ್ರೀ ಶಾರದಾಂಬೆಯು ತನ್ನ ಕೃಪಾದೃಷ್ಟಿಯಿಂದ ಭಕ್ತರನ್ನು ಅನುಗ್ರಹಿಸುತ್ತಿದ್ದಾಳೆ.

ಶೃಂಗೇರಿಯ ಶ್ರೀಶಾರದಾಮ್ಮನವರು

ಮಹಾಕಾಳಿ-ಮಹಾಲಕ್ಷ್ಮಿ-ಮಹಾಸರಸ್ವತಿ ಸ್ವರೂಪಿಣಿಯಾದ ಶ್ರೀಶಾರದೆಯು ಕೈಗಳಲ್ಲಿ ಅಮೃತತ್ವದ ಸಂಕೇತವಾದ ಅಮೃತ ತುಂಬಿದ ಕಲಶ, ಸಕಲವಿದ್ಯೆಗಳ ಪ್ರತೀಕವಾದ ಪುಸ್ತಕ, ವಿಶ್ವದ ಸ್ಥೂಲರೂಪಕ್ಕೆ ಕಾರಣವಾದ ಬೀಜ ಅಥವಾ ಅಕ್ಷರಗಳನ್ನು ಪ್ರತಿನಿಧಿಸುವ ಜಪಮಾಲೆ ಮತ್ತು ಜೀವ-ಬ್ರಹ್ಮೈಕ್ಯ ಜ್ಞಾನದ ಪ್ರತೀಕವಾದ ಚಿನ್ಮುದ್ರೆಯನ್ನು ಧರಿಸಿದ್ದಾಳೆ.

1999 ರಲ್ಲಿ ಪ್ರಸ್ತುತ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀಭಾರತೀತೀರ್ಥ ಮಹಾಸ್ವಾಮಿಗಳವರು ಶೃಂಗೇರಿಯಲ್ಲಿ ಶಾರದಾಮ್ಮನವರಿಗೆ (ಒಂದು ಕೋಟಿ ಮೌಲ್ಯದ) ಚಿನ್ನದ ರಥವನ್ನು ಸಮರ್ಪಿಸಿದರು. ಜಗದ್ಗುರುಗಳ ಸುವರ್ಣ ಮಹೋತ್ಸವ ವರ್ಧಂತಿ (ಜನ್ಮದಿನ) ದ ಸಂದರ್ಭದಲ್ಲಿ, ದೇವಸ್ಥಾನದ ಗರ್ಭಗುಡಿಯ ಪ್ರವೇಶದ್ವಾರಕ್ಕೆ ಚಿನ್ನದ ಬಾಗಿಲುಗಳನ್ನು ನಿರ್ಮಿಸಲಾಯಿತು. (ಇಪ್ಪತ್ನಾಲ್ಕು ಲಕ್ಷ ರೂ. ಮೌಲ್ಯದ ಚಿನ್ನದ ಹೊದಿಕೆಯನ್ನು ಬಾಗಿಲುಗಳಿಗೆ ಅಳವಡಿಸಲಾಗಿದೆ).  ಚಿನ್ನದ ಬಾಗಿಲು ಅಷ್ಟ ಲಕ್ಷ್ಮಿಯ ವಿಗ್ರಹಗಳಿಂದ ಕೂಡಿದ್ದು, ಅದ್ಭುತ ಕಲಾಕೃತಿಯನ್ನು ಬಿಂಬಿಸುತ್ತದೆ.

ಉತ್ಸವಗಳು

ಶರನ್ನವರಾತ್ರಿ ಉತ್ಸವ ಸಂದರ್ಭ ಪ್ರತಿದಿನ ನಡೆಯುವ ದರ್ಬಾರ್ ಕಾರ್ಯಕ್ರಮ

ಶೃಂಗೇರಿಯಲ್ಲಿ ನಡೆಯುವ ಎಲ್ಲ ಉತ್ಸವಗಳಿಗೆ ಮುಕುಟಪ್ರಾಯವಾದದ್ದೇ ಶ್ರೀಶಾರದಾ ಶರನ್ನವರಾತ್ರಿ ಮಹೋತ್ಸವ.  ಪ್ರತಿವರ್ಷ ಆಶ್ವಯುಜ ಶುಕ್ಲ ಪ್ರತಿಪತ್ ನಿಂದ ಏಕಾದಶಿ ಪರ್ಯಂತದ11 ದಿನಗಳ ಕಾಲ ನಡೆಯುವ ಈ ಹಬ್ಬವು ಮಹಾನವಮಿಯಂದು ನಡೆಯುವ ಶತಚಂಡೀಯಾಗದ ಪೂರ್ಣಾಹುತಿಯೊಂದಿಗೆ ಸಮಾಪ್ತಿಯಾಗುತ್ತದೆ. ಒಂಭತ್ತು ದಿನಗಳಲ್ಲಿ ಪ್ರತಿದಿನ ಜಗದ್ಗುರು ಮಹಾಸ್ವಾಮಿಗಳವರಿಂದ ಅಮ್ಮನವರಿಗೆ ವಿಶೇಷಪೂಜೆಯು ನೆರವೇರುತ್ತದೆ. ರಾತ್ರಿ ಶ್ರೀಶಾರದಾಂಬೆಯ ದೀಪಾರಾಧನೆಯ ವೇಳೆ ಮಹಾಸ್ವಾಮಿಗಳವರು ರಾಜಪೋಷಾಕಿನಲ್ಲಿ ಚಿತ್ತೈಸಿ, ನವರಾತ್ರಿ ದರ್ಬಾರ್ ನಡೆಸಿಕೊಡುತ್ತಾರೆ. ಏಕಾದಶಿಯಂದು ಶ್ರೀಶಾರದಾಂಬೆಗೆ ರಥೋತ್ಸವ, ಜಗದ್ಗುರು ಮಹಾಸ್ವಾಮಿಗಳವರ ಅಡ್ಡಪಲ್ಲಕ್ಕಿ ಉತ್ಸವವು ನೆರವೇರುತ್ತದೆ. ಚೈತ್ರ ಶುಕ್ಲ ಪೂರ್ಣಿಮಾ ದಿನದಂದು ಶ್ರೀಶಾರದಾ ದೇಗುಲದಲ್ಲಿ ವಿಶೇಷ ಪೂಜೆ, ವೈಶಾಕ ಕೃಷ್ಣ ಪ್ರತಿಪತ್ ನಲ್ಲಿ ಮಹಾಭಿಷೇಕ, ಕಾರ್ತಿಕ ಪೂರ್ಣಿಮೆಯಂದು ಮಹಾದೀಪೋತ್ಸವ, ಮಾಘ ಶುಕ್ಲ ಪಂಚಮಿ, ಮಾಘ ಕೃಷ್ಣ ದ್ವಿತೀಯಾಗಳಂದು ಜಗದ್ಗುರುಗಳಿಂದ ಶ್ರೀಶಾರದಾಂಬೆಗೆ ವಿಶೇಷ ಪೂಜೆಯು ನಡೆಯುತ್ತದೆ. ಮಾಘ ಕೃಷ್ಣ ತೃತೀಯಂದು ಶ್ರೀ ಶಾರದಾಂಬೆಗೆ ರಥೋತ್ಸವವನ್ನು ನೆರವೇರಿಸಲಾಗುತ್ತದೆ.

ದರ್ಶನದ ಸಮಯ

ಬೆಳಿಗ್ಗೆ – 6.00AM ರಿಂದ 2.00PM

ಸಂಜೆ – 4.00PM ರಿಂದ  9.00PM

ಸೇವೆಗಳು

  • ಅರ್ಚನೆ – ಅಷ್ಟೋತ್ತರ, ತ್ರಿಶತಿ, ಸಹಸ್ರನಾಮ, ಲಕ್ಷಾರ್ಚನೆ
  • ದುರ್ಗಾ ಶತಚಂಡಿ
  • ದಿಂಡಿ ದೀಪಾರಾಧನೆ
  • ಉದಯಾಸ್ತಮಾನ ಪೂಜೆ
  • ಸುಪ್ರಭಾತ ಸೇವೆ
  • ಸ್ವರ್ಣಪುಷ್ಪ ಸೇವೆ
  • ಅಕ್ಷರಾಭ್ಯಾಸ
  • ಸರಸ್ವತಿ ಪೂಜೆ

ಹೆಚ್ಚಿನ ವಿವರಗಳಿಗಾಗಿ ಸೇವಾ ಪುಟವನ್ನು ನೋಡುವುದು